ವಿಲ್ಕ್ಸ್, ಮಾರ್ಕ್ ಕರ್ನಲ್
	1760-1831. ಯೋಧ, ಚರಿತ್ರಕಾರ; ಮೈಸೂರು ಸಂಸ್ಥಾನದ ಬ್ರಿಟಿಷ್ ರೆಸಿಡೆಂಟ್ (1803-08). ಇಂಗ್ಲೆಂಡಿನ ಐಲ್ ಆಫ್ ಮ್ಯಾನ್‍ನಲ್ಲಿ ಜನಿಸಿದ ಈತ ಚರ್ಚಿನ ಸೇವೆಯನ್ನು ಮಾಡುವ ಉದ್ದೇಶದಿಂದ ಉನ್ನತಮಟ್ಟದ ಶಾಸ್ತ್ರೀಯ ಶಿಕ್ಷಣ ಪಡೆದ. 1783ರಲ್ಲಿ ಈಸ್ಟ್ ಇಂಡಿಯ ಕಂಪನಿಯ ಸೈನ್ಯ ಸೇರುವ ಉದ್ದೇಶದಿಂದ ಮದರಾಸಿಗೆ ಬಂದು ಮದರಾಸಿನ ಸೈನ್ಯ ಮಂಡಳಿಯ ಉಪಕಾರ್ಯದರ್ಶಿ ಯಾದ. ಅನಂತರ ಮದರಾಸಿನ ಗವರ್ನರ್ ಜಾನ್ ಹಾಲೆಂಡ್‍ನ ಏಡ್-ಡಿ-ಕ್ಯಾಂಪ್ ಆದ. ಟಿಪ್ಪುವಿನ ವಿರುದ್ಧ 1790-92ರವರೆಗೆ ನಡೆದ ಯುದ್ಧದ ವೇಳೆಯಲ್ಲಿ ಕರ್ನಲ್ ಜೇಮ್ಸ್ ಸ್ಟ್ಯೂವರ್ಟನಿಗೆ ಎ.ಡಿ.ಸಿ. ಮತ್ತು ಮಿಲಿಟರಿ ಕಾರ್ಯದರ್ಶಿಯಾಗಿದ್ದ. 1792ರ ಒಪ್ಪಂದದ ಅನಂತರ ವಿಲ್ಕ್ಸ್ ಅಸಿಸ್ಟೆಂಟ್ ಜನರಲ್ ಆಗಿಯೂ ಅನಂತರ ಜನರಲ್ ಸ್ಟ್ಯೂವರ್ಟ ನಿಗೆ ಕಾರ್ಯದರ್ಶಿಯಾಗಿಯೂ ಕೆಲಸಮಾಡಿದ. ಅನಾರೋಗ್ಯದ ಕಾರಣ 1794ರಲ್ಲಿ ಯುರೋಪಿಗೆ ಹೋಗಿ ಅಲ್ಲಿ 1799ರವರೆಗಿದ್ದು ಪುನಃ ಭಾರತಕ್ಕೆ ಹಿಂದಿರುಗಿ ಮದರಾಸಿನ ಗವರ್ನರ್ ಆಗಿದ್ದ ಎಡ್ವರ್ಡ್ ಕ್ಲೈವನಿಗೆ ಮಿಲಿಟರಿ ಮತ್ತು ಆಪ್ತಕಾರ್ಯದರ್ಶಿಯಾಗಿದ್ದು ಪೋರ್ಟ್ ಸೇಂಟ್ ಜಾರ್ಜಿನ ಟೌನ್ ಮೇಜರ್ ಕೂಡ ಆಗಿದ್ದ. 1803-08ರಲ್ಲಿ ಮೈಸೂರಿನಲ್ಲಿ ರೆಸಿಡೆಂಟ್ ಆಗಿದ್ದ. 1808ರಲ್ಲಿ ಭಾರತದಿಂದ ಹಿಂದಿರುಗಿದ. 1813-16ರವರೆಗೆ ಸೇಂಟ್ ಹೆಲೀನ ದ್ವೀಪದಲ್ಲಿ ಗವರ್ನರ್ ಆಗಿ ಕೆಲಸಮಾಡಿ ನೆಪೋಲಿಯನ್ ಬೋನಪಾರ್ಟೆ ಅಲ್ಲಿ ಖೈದಿಯಾಗಿದ್ದ ಸಮಯದಲ್ಲಿ ನಿವೃತ್ತನಾದ. 1818ರಲ್ಲಿ ಕೆಲಸದಿಂದಲೂ ನಿವೃತ್ತನಾಗಿ, 1831ರಲ್ಲಿ ನಿಧನನಾದ.

	ಈತ ಅನೇಕ ಗ್ರಂಥಗಳನ್ನು ರಚಿಸಿದ್ದಾನೆ. ಅವುಗಳಲ್ಲಿ ಅತ್ಯಂತ ಮುಖ್ಯವಾದದ್ದು ಹಿಸ್ಟಾರಿಕಲ್ ಸ್ಕೆಚಸ್ ಆಫ್ ದಿ ಸೌತ್ ಆಫ್ ಇಂಡಿಯನ್ ಇನ್ ಎನ್ ಅಟೆಂಪ್ಟ್ ಟು ಟ್ರೇಸ್ ದಿ ಹಿಸ್ಟರಿ ಆಫ್ ಮೈಸೂರ್. ಇದು ಮೂರು ಸಂಪುಟಗಳಲ್ಲಿ ಇದೆ. ಮೊದಲನೆಯದು 1810ರಲ್ಲೂ ಉಳಿದವು 1817ರಲ್ಲೂ ಪ್ರಕಟವಾದವು. 3ನೆಯ ಮೈಸೂರು ಯುದ್ಧದಲ್ಲಿ ಭಾಗವಹಿಸಿದ್ದ ಕಾಲದಲ್ಲಿ ಮತ್ತು ಅನಂತರ ಈ ಸಂಸ್ಥಾನದಲ್ಲಿ ರೆಸಿಡೆಂಟ್ ಆಗಿದ್ದ ಸಂದರ್ಭದಲ್ಲಿ ತಾನು ಗಳಿಸಿದ ಅನುಭವ ಮತ್ತು ವಿಷಯಜ್ಞಾನದ ಮೇಲೆ ರಚಿತವಾದ ಈ ಇತಿಹಾಸ ಗ್ರಂಥ ಈ ದೇಶದ ಇತಿಹಾಸ ರಚನೆಗೆ ಅದರಲ್ಲೂ 1799ರವರೆಗೆ ಒಡೆಯರು ಮತ್ತು ಹೈದರ್, ಟಿಪ್ಪು ಕಾಲದ ಇತಿಹಾಸದ ಬಗ್ಗೆ ಇಂದಿಗೂ ಮೂಲ ಆಕರವಾಗಿದೆ. ಬ್ರಿಟಷ್ ದೃಷ್ಟಿಕೋನವಷ್ಟೇ ಇಲ್ಲಿದೆಯೆಂಬ ಅಪವಾದವೊಂದನ್ನು ಬಿಟ್ಟರೆ ಹೆಚ್ಚಿನ ಸಮಕಾಲೀನ ಆಧಾರಗಳ ಉಪಯೋಗ, ಉತ್ತಮಶೈಲಿ ಮತ್ತು ವಿಷಯನಿರೂಪಣೆ ಇವುಗಳಿಂದ ಇದೊಂದು ಉತ್ಕøಷ್ಟ ಗ್ರಂಥವಾಗಿದೆ. ಮೈಸೂರು ಇತಿಹಾಸ ರಚನೆಯ ಜೊತೆಗೆ ಈತ ಮೈಸೂರು ಸಂಸ್ಥಾನದ ಆಂತರಿಕ ಆಡಳಿತವನ್ನು ಕುರಿತು ಒಂದು ವರದಿಯನ್ನೂ ತಯಾರಿಸಿದ್ದಾನೆ. ಸಂಸ್ಥಾನದ ಆದಾಯ ಮೂಲಗಳು ಮತ್ತು ಆಯವ್ಯಯಕ್ಕೆ ಸಂಬಂಧಿಸಿದಂತೆ ಇವನ ವರದಿ ಅತ್ಯಂತ ಉಪಯುಕ್ತ ದಾಖಲೆಯಾಗಿದೆ. ಹಲವು ಕಾಲ ಇವನು ಇಂಗ್ಲೆಂಡಿನ ಏಷ್ಯಾಟಿಕ್ ಸೊಸೈಟಿಯ ಉಪಾಧ್ಯಕ್ಷನೂ ಆಗಿದ್ದ. ಆಗ ಅರಿಸ್ಟಾಟಲನ ಸಿದ್ಧಾಂತವನ್ನವಲಂಬಿಸಿ ಟ್ಯೂಸ್ ಪ್ರದೇಶದ ನಾಸಿರುದ್ದೀನ್ ಎಂಬ ವಿದ್ವಾಂಸನಿಂದ ರಚಿತವಾದ ತತ್ತ್ವಶಾಸ್ತ್ರಕ್ಕೆ ಸಂಬಂಧಿಸಿದ ಅಖ್ಲಕ್-ಇ-ನಾಸಿರಿ ಎಂಬ ಗ್ರಂಥದ ವಿಮರ್ಶನಾಕೃತಿಯನ್ನೂ ಬರೆದ.

	ಆಡಳಿತ, ಇತಿಹಾಸ, ತತ್ತ್ವ ವಿಮರ್ಶೆಯ ಬಗ್ಗೆ ಗ್ರಂಥಗಳನ್ನು ಬರೆದಿರುವ ಈತನನ್ನು ಜ್ಞಾನಿ, ಮೇಧಾವಿ, ದಯಾವಂತ, ಧೃಡತೆ ಯಿಂದಿರುವ ಆಡಳಿತಗಾರ ಎಂದು ನೆಪೋಲಿಯನ್ (ಸೇಂಟ್ ಹೆಲೀನದಲ್ಲಿದ್ದಾಗ) ಬಣ್ಣಿಸಿದ್ದಾನೆ.	
(ಬಿ.ಎಸ್.ಎ.; ಕೆ.ವಿ.ಟಿ.)
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ